Sunday, 28 January 2018

ಮಧು'ವ್ಯಾ'

ಮನೆಕಟ್ಟಿ ನೋಡು, ಒಂದು ಮದುವೆ ಮಾಡಿ ನೋಡು.
ಈ ಗಾಧೆಯ ಅರ್ಥ ಇತ್ತೀಚೆ ಅರ್ಥವಾಗಲು ಶುರುವಾಗಿದೆ. 
ನನಗೆ ಕನ್ವೆಂಷನಲಿ/ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಬೇಕೇ ಎಂಬ ಪ್ರಶ್ನೆ? 

ದಿನ ಬೆಳೆಗಾದರೆ ಒಂದೇ ಮಾತು, ಹುಡುಗರ ಫೋಟೋ ತೋರಿಸುವ ಅಣ್ಣ ಅತ್ತಿಗೆ, ಮಗಳೇ ಇವನು ಇಷ್ಟ ಅದನೆ ಎಂದು ಕೇಳುವ ಅಪ್ಪ ಅಮ್ಮ. ಹೂ ಅಪ್ಪ ಇಷ್ಟ ಅಂತ ಅಥವಾ ಇಲ್ಲ ಅಪ್ಪ ಇಷ್ಟವಾಗಲಿಲ್ಲ ಎಂದು ಹೇಳುವುದಾದರೂ ಹೇಗೆ. ನೋಡದೆ ಮಾತಾಡದೆ, ತಿಳಿಯದೆ ಕೇವಲ ರೂಪ, ಕೆಲಸ ಹಾಗು ಮನೆತನ ನೋಡಿ ಏನಾದರು ಹೇಳಲು ಸಾಧ್ಯವೇ? ಎಂದು ನಾನು ಕೇಳಿದಾಗಲೆಲ್ಲ, ಅವರದ್ದು ಒಂದೇ ಪ್ರಶ್ನೆ, ಫೋಟೋ ನೋಡಿ ಮುಂದುವರಿಸಬಹುದೇ ಇಲ್ಲವೇ ಎಂದು ನೀನು ಹೇಳಿದರೆ ಸಾಕು ಅಂತ. ಅವರು ಸಾಮಾನ್ಯವಾಗಿ ತೋರಿಸುವ ಯಾರನ್ನು ಬೇಡ ಅನ್ನುವ ಹಾಗಂತೂ ಇರುವುದಿಲ್ಲ, ಆದರೂ ನನಗೆ ಉತ್ತರಿಸಲು ಹಿಂಸೆಯಾಗುವಂತಹ ಪ್ರಶ್ನೆಗಲ್ಲನು ಏಕೆ ಕೇಳುತ್ತಾರೆಂದು ಅರ್ಥವಾಗುವುದಿಲ್ಲ. ಅವರು ಮಾಡುತ್ತಿರುವುದು ತಪ್ಪೆಂದಲ್ಲ, ಆದರೆ ಅದು ನನಗೆ ಸರಿಬರುತ್ತಿಲ್ಲ.
ಹೂ ಸರಿ ಚೆನ್ನಾಗಿರುವ. ಮಾತು ಮುಂದುವರಿಸಬಹುದು ಎಂದು ಹೇಳಲು ಬಹಳ ಹಿಂಸೆ. ಅಳುವೇ ಬರುತ್ತದೆ. ಇಷ್ಟು ಸರಳ ವಾಕ್ಯವೇಳಲು ಯಾಕಿಷ್ಟು ಕಷ್ಟವೆಂದು ನನಗರಿಯದು. ನನ್ನಿಂದ ಮನೆಯವರಿಗೆಲ್ಲ ಕಷ್ಟವೆಂಬ ಅಪರಾಧಿ ಭಾವ ಬೇರೆ. ಇದೆಲ್ಲ ಒಂದು ಕಡೆಯಾದರೆ, ಮತ್ತೊಂದೆಡೆ ಯಾರನ್ನು ಭೇಟಿ ಮಾಡಿದರು, ಸೇಮ್ ರೊಟೀನ್ ಪ್ರಶ್ನೆಗಳು. ನಿಮಗೆ ಏನು ಇಷ್ಟ, ಯಾವ ಬಣ್ಣವಿಷ್ಟ, ನಿಮ್ಮ ಹುಡುಗನಲ್ಲಿ ಏನನ್ನು ಬಯಸುತ್ತೀರಿ, ಮದುವೆಗೆ ಸಿದ್ಧವಿರುವಿರಾ ಅಥವಾ ಮನೆಯವರ ಒತ್ತಡವೇ? ಪಿಹೆಚ್ಡಿ ಯಾವಾಗ ಮುಗಿಯುವುದು? ಮುಂದಿನ ಪ್ಲಾನ್ಸ್ ಏನು? ಅದೇ ರಾಗ, ಅದೇ ತಾಳ.

ದೇವರೇ, ಸಾಕಾಗಿದೆ ಬಹಳ ಸಾಕಾಗಿದೆ, ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಕೊಟ್ಟು, ಆ ಉತ್ತರದ ಮೇಲೆ ನನಗೆ ಸಂಶಯ ಶುರುವಾಗಿದೆ. ಹೌದೇ? ನನಗೆ ಹಸಿರು ಬಣ್ಣವಿಷ್ಟವೇ? ಹೌದ ನನಗದು ಬೇಕಾ, ಇದು ಬಯಸಿರುವೆನೇ? ಹೌದ ಅದು ಸರಿಯೇ, ಇದು ತಪ್ಪೇ? ಒಂದು ಅರಿವಿಗೆ ಸಿಗುತ್ತಿಲ್ಲ. ಈ ಪ್ರಶ್ನೆಗಲ್ಲನೆಲ್ಲ ಕೇಳದೆಯೇ, ಹಾಗೆಯೇ ನನ್ನನು ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲವೇ? ಅಥವಾ ಅದು ಸಾಧ್ಯವೇ? ನನಗರಿಯದು. ಒಬ್ಬ ವ್ಯಕ್ತಿ ಏನೆಂದು ಸಂಪೂರ್ಣವಾಗಿ ಯಾರಿಗೂ ಅರಿಯಲು ಸಾಧ್ಯವಿಲ್ಲ. ನಾನೇನೆಂಬ ಸಂಪೂರ್ಣ ಅರಿವು ನನಗಿಲ್ಲದೆಯೆ, ಬೇರೆಯವರಿಗದು ಹೇಗೆತಾನೆ ಅರಿವಿಗೆ ಬರಲು ಸಾಧ್ಯ? ಹೀಗಿರುವಾಗ ಒಮ್ಮೆ ಭೇಟಿಯಾದ ವ್ಯಕ್ತಿಯನ್ನು ಮದುವೆಯಾಗಲು ಓಕೆ ಮಾಡುವುದಾದರೂ ಹೇಗೆ? ಹಾಗಂತ ಪದೇ ಪದೇ ಅವರನ್ನು ಭೇಟಿಯಾದರು ಅದರ ಔಟ್ಪುಟ್ ಏನು ಬದಲಾಗದು ಎಂಬುವುದು ಒಂದು ವಾದ. ಆದರೆ, ಪದೇ ಪದೇ ಭೇಟಿಯಾದರೆ, ಅವರ ಮೇಲೆ ಭಾವನೆಗಳು ಮೂಡಭಹುದಲ್ಲವೇ? ಅವರ ಯಾವುದೊ ಸಣ್ಣ ಸಣ್ಣ ವಿಷಯದ ಮೇಲೆ ನಮಗೆ ಪ್ರೀತಿ ಮೂಡಭಹುದಲ್ಲವೇ? ಅಥವಾ ಅಸಮಾಧಾನ, ಕೋಪ? ಆದರೆ ಇದ್ಯಾವುದಕ್ಕ್ಕೂ ನಮ್ಮ ಸಮಾಜ ಅವಕಾಶ ಮಾಡಿಕೊಡುವುದಿಲ್ಲ.
೨೦೦ ರೂಪಾಯಿ ಬೆಲೆ ಬಾಳುವ ಹರಿದು ಹೋಗುವ ಅಂಗಿಯನ್ನು ಖರೀದಿಸುವಾಗ ೨ ಬಾರಿ ಯೋಚಿಸುವ ಜನಗಳು, ಜೀವನ ಪೂರ್ತಿ ಜೊತೆಗಿರಬೇಕಾದ ವ್ಯಕ್ತಿಯ ಆಯ್ಕೆ ಅಷ್ಟು ಕಮ್ಮಿ ಸಮಯದಲ್ಲಿ ಹೇಗೆ ತಾನೇ ಮಾಡಿಯಾರು? ಗಟ್ಸ್ ಫೆಲ್ಲಿಂಗ್ಸ್ ಮುಖಾಂತರ ಹೋಗುವಂತಹ ವಿಷಯವೇ ಇದು? ಲಾಜಿಕಲ್ ರಷನಲೆ ಎಂಬುದು ಸ್ವಲ್ಪವಾದರೂ ಇರಬೇಕಲ್ಲವೇ?

 ಜೀವನದ ಎಲ್ಲವಿಷಯವನ್ನು ವಿಜ್ಞಾನದ/ ತರ್ಕಬದ್ಧವಾಗಿ ಮಾಡುವೆ ಎಂಬುದು ಸುಳ್ಳು. ನಮ್ಮಿಂದ ವಿಜ್ಞಾನವೇ ಹೊರತು ವಿಜ್ಞಾನದಿಂದ ನಾವಲ್ಲ.  ಫಾರ್ ದಿ ಮೊಮೆಂಟ್ ಲೆಟ್ಸ್ ಫರ್ಗೆಟ್ ಅಬೌಟ್ ಸೈನ್ಸ್ ಆಫ್ ಲವ್, ಲಸ್ಟ್, ಸೈಕಾಲಜಿ ಆಪ್ ಲವ್ ಅಂಡ್ ಅಟ್ರಾಕ್ಶ್ನ್ / ಸಧ್ಯದ ಮಟ್ಟಿಗೆ ಪ್ರೀತಿ, ಪ್ರೇಮ, ಮೋಹ, ಆಕರ್ಷಣೆ, ಕಾಮಗಳ ಹಿಂದಿರುವ ವಿಜ್ಞಾನವನ್ನು ಮರೆಯೋಣ/ಪರಿಗಣಿಸುವುದು ಬೇಡ. ನಮ್ಮ ಕವಿಮಹಾಶಯರ ಪ್ರಕಾರವೇ ಹೋಗೋಣ. ಪ್ರೀತಿ ಮೂಡಲು ಕೆಲವೇ ಕ್ಷಣ ಸಾಕು, ನಿನ್ನ ಕಣ್ನೋಟವೆ ಸಾಕು, ಮುದ್ದಾದ ಆ ನಗುವು ನನಗೆ ಬೇಕು ಎನ್ನುವುದು ನಿಜವೇ ಇರಬಹುದು, ಆದರೆ ಈ ಪ್ರೀತಿಯನ್ನು ಉಳಿಸಿ, ಬೆಳೆಸಿ, ನಿಭಾಯಿಸುವ ಬಗ್ಗೆ ಕ್ಷಣಾದ್ರದಲ್ಲಿ ನಿರ್ಧರಿಸುವುದಾದರೂ ಹೇಗೆ? ನಾನೇನೋ ಎಲ್ಲದಕ್ಕೂ ಹೊಂದಿಕೊಂಡು ಹೋಗುವೆ ಎಂಬ ಭರವಸೆ ನಿಮಗೆ ನಿಮ್ಮಮೇಲೆ ಇರಬಹುದು. ಆದರೆ ಅವರು ಹಾಗೆಯೆ ಇರಬೇಕಿಂದಲ್ಲ. ಅದು ಅವರವರಿಷ್ಟ. ಬೆಳೆದುಬಂದ ರೀತಿ ನೀತಿ.
ಮದುವೆ ಎಂಬ ಮೂರಕ್ಷರದ ಪದ ಅಷ್ಟು ಸುಲಭವಲ್ಲ. ಇಬ್ಬರು ಒಬ್ಬರಾಗಿರಬೇಕು. ಎತ್ತು ಏರಿಗೆಳಿಯಿತು, ಕೋಣ ನೀರಿಗೆಳೆಯಿತು ಯೆಂದಾಗಬಾರದಲ್ಲವೇ. ನಿನ್ನ ನಿರ್ಧಾರಗಳು ಕೇವಲ ನಿನ್ನದಾಗಿರದು, ಅದು ನಿಮ್ಮದಾಗಿರಬೇಕು. ಕೆಲಸದಿಂದ ದಣಿದು ಮನೆಗೆ ಬಂದಾಗ ಅವರ ಮುದ್ದಾದ ಮೊಗದಲೊಂದು ದಣಿವಾರಿಸುವ ನಗೆಯೊಂದು ಇರಬೇಕು. ಅದು ಬಿಟ್ಟು ಅವನ ಮುಖ ಒಂದು ಕಡೆ, ಇವಳ ಮುಖ ಇನ್ನೊಂದು ಕಡೆ ಎಂಬಂತಿದ್ದರೆ ದಣಿವು ಕೋಪವಾಗಿ ಬದಲಲು ಹೆಚ್ಚು ಸಮಯ ಬೇಡ. ಕೋಪ ನೋವಾಗಲು. ನೋವು ದ್ವೇಷವಾಗಲು. ಜೀವನದಮೇಲೆ ಜಿಗುಪ್ಸೆ ಮೂಡಲು.
ಜೀವನದ ಕಟ್ಟಕಡೆಯ ಉದ್ದೇಶ ನೆಮ್ಮದಿ, ಪ್ರೀತಿ. ಕೋಟಿ ಸಂಪಾದಿಸಿದರೇನು ನೆಮ್ಮದಿಯಿಲ್ಲದ ಜೀವನ, ಜೀವನವೇಯಲ್ಲ. (ನೆಮ್ಮದಿಯ ಜೊತೆ ಕೋಟಿಯಿದ್ದರೆ "ಸೋನೇ ಫೆ ಸುಹಾಗ" ಅದು ಬೇರೆಯ ವಿಷಯ. ಸದ್ಯಕ್ಕೆ ಬೇಡ.) ಹಾಗಾಗಿ ಕೇವಲ ಮುಖ ನೋಡಿ, ಹಣ ನೋಡಿ, ಗುಣವ ಅರಿಯುವುದು ಸ್ವಲ್ಪ ಹೆಚ್ಚೇ ಕಷ್ಟ.

ದಿಕ್ಕೇ ತೋಚದಿರುವಾಗ ಅಪ್ಪನ ಮಾತುಗಳ ಆಶ್ರಯಬೇಕು ನನಗೆ. ಆದರೆ ಇದರಬಗ್ಗೆಯೆಲ್ಲ ಚರ್ಚಿಸಲು ಮನೆಯೇ ವಾತಾವರಣ ಸರಿ ಮೂಡದು. ಒಬ್ಬರು ಕೋಪ ಮಾಡಿಕೊಂಡರೆ, ಮತ್ತೊಬರು ನೋವು ಮಾಡಿಕೊಂಡು ಮೌನದಿ ಕಣ್ಣೀರು ಸುರಿಸುವರು. ಮನೆಯವರಿಗೆಲ್ಲ ಇದರ ಬಗ್ಗೆ ಕೂತು ಮಾತನಾಡುವ, ಒಂದು ಆರೋಗ್ಯಕರವಾದ ಚರ್ಚೆ ಮಾಡುವ ವ್ಯವಧಾನ, ಸಮಾಧಾನವಾಗಲಿ ಇಲ್ಲಾ. ನನಗೆ ತಿಳಿಯದ ವಿಷಯದಬಗ್ಗೆ ತಿಳಿಹೇಳುವ ಮನಸ್ಸಿಲ್ಲ. ಇದೆಲ್ಲದರ ನಡುವೆ ಸಿಲುಕಿ ತಲೆ ಕೆಡುವ ಮುನ್ನ ನನಗೆ ನಾ ಸಾಂತ್ವನವೇಲಿದೆ. ಎಲ್ಲಾರ ಮನೆ ದೋಸೆ ತೂತು. ನಮ್ಮಮನೆಯ ದೋಸೆ ಇದರಿಂದ ಹೊರತೇನಲ್ಲ. ಎಲ್ಲಾರ ಜೀವನದಲ್ಲೂ ಈ ಸಮಯ ಬಂದಿರುತ್ತದೆ. ಎಲ್ಲರಿಗೂ ಒಂದು ಸಣ್ಣ ನಡುಕ ಬಂದಿರುತ್ತದೆಯೆಂದು.

ಅಪ್ಪ ಯಾವಾಗಲು ಹೇಳುತ್ತಾರೆ. ಖುಷಿಯಾಗಿರು. ನಿನ್ನ ಖುಷಿ ನನಗೆ ಬಹಳ ಮುಖ್ಯವೆಂದು.
ಜೀವನದ ಎಲ್ಲಾ ನೋವಿನ ಘಟ್ಟದಲ್ಲೂ, ಹಿಂಸೆಯ ಸಮಯದಲ್ಲೂ, ಉಸಿರುಗಟ್ಟಿಸುವ ವಾತಾವರಣದಲ್ಲೂ ತಮಾಷೆ ಮಾಡಿ ನಗಿಸುವ ನಮ್ಮಪ್ಪ ನನ್ನ ನಿಜ ಸ್ನೇಹಿತ.
ಅವರು ಮದುವೆಯ ಬಗ್ಗೆ ಹೇಳಿದ ಒಂದೇ ಮಾತೆಂದರೆ, "ಮಗಳೇ, ಮದುವೆಯೆಂದರೆ ಮಧು'ವ್ಯ' ". ಮೊದಲಿಗೆ ಮಧು (ಮಧು ಚಂದ್ರಮ). ನಂತರ ವ್ಯಾ(ಉಲ್ಟಿ/ವೊಮಿಟ್/ಕಾರುವುದು). ಎಂದು ಹೇಳಿ ನಕ್ಕಿದ್ದರು. ಇದು ಇಷ್ಟು ಸರಳ ವಾಕ್ಯವಲ್ಲ. ಇದರ ಹಿಂದೆಯೂ ಬಹಳ ಘಡತೆಯಿದೆ ಅವರ ಬೇರೆ ಮಾತುಗಳಂತೆ. ಆದರೆ ಅರ್ಥೈಸಿಕೊಳ್ಳುವಷ್ಟು ದೊಡ್ಡವಳಾಗಿಲ್ಲ ನಾನು.

ಜೀವನ ಚಕ್ರ ಚಲಿಸುತ್ತಲ್ಲೇ ಇರುತ್ತದೆ. ಜೀವನ ಬಂದಂತೆ ಸ್ವೀಕರಿಸಬೇಕು.
ಮುಂದೇನು ಅನ್ನುವುದಕ್ಕಿಂದ, ಇಂದು ಆರಾಮವಾಗಿ ನನಗಿಷ್ಟ ಬಂದಂತೆ ಇರೋಣ. ಬೆಚ್ಚಗೆ ಹೊದೆದು ಮಲಗೋಣ.



1 comment: