Tuesday, 8 August 2017

ಒಂದು ಕಥೆಯ ಕಥೆ

ನನಗೆ ಕಥೆ ಕೇಳೋದು ಅಂದ್ರೆ ತುಂಬಾ ಇಷ್ಟ!!
ಕಥೆ ಅಂದ್ರೆ ನೆನಪಾಗೋದೆ ಅಜ್ಜ, ಅಜ್ಜನ ಕಾಲದ ಅದೇ ಹಳೆಯ ಸಾಲುಗಳು, 'ಒಂದೂರಲ್ಲಿ ಒಬ್ಬ ರಾಜ ಇದ್ದ .......'
ಆದ್ರೆ ನನಗೆ ಕಥೆ ಹೇಳ್ಬೇಕಾದ ನನ್ನಜ್ಜ ನನ್ನನ್ನು ಬೇಗ ಅಗಲಿದರು.

ಹೀಗಿರುವಾಗ ನನಿಗೊಬ್ಬ ಅಜ್ಜ ಸಿಕ್ಕಿದ್ದ, ವಯಸ್ಸು ೨೮. ಅಜ್ಜನಿಲ್ಲದ ನನಗೆ ಅವನೇ ಏಂಜಲ್ ಅಜ್ಜ....
ಅಯ್ಯೋ ನಿಮ್ಗು ನನ್ನ ತರಾನೇ ಗೊಂದ್ಲಾನಾ ? ಗೊಂದಲಕೊಳಗಾಗಬೇಡಿ, ನಾನು ಅಜ್ಜ ಅಂದಿದ್ದು ನನ್ನ ಒಬ್ಬ ಗೆಳೆಯನನ್ನ.

ಅವ್ನು ಅಷ್ಟೇ, ಕಥೆ ಹೇಳೋ ಅಂತ ನಾನು ಕೇಳಿದಾಗಲೆಲ್ಲ, ಒಂದೂರಲ್ಲಿ ಒಬ್ಬ ರಾಜ ಇದ್ದ, ಅವನಿಗೆ ಹೆಂಡ್ತಿ ಇದ್ಲು, ಅವಳೇ ರಾಣಿ ಗೊತ್ತಾ!! ಅವ್ರ್ಗೆ ಇಬ್ರು ಮಕ್ಳು....... ಹೀಗೆ ಅದು ಇದು ಅಂತ ಅವನೇ ಕಥೆ ಕಟ್ಟಿ ಕಥೆ ಹೇಳ್ತಿದ್ದ.

ಅಯ್ಯೋ ಸಾಕಾಯ್ತು, ನಿಲ್ಲಿಸೋ. ಈ ಕಥೆ ಸಾಕು, ಯಾವದಾದ್ರು ಜೋಕ್ ಹೇಳು ಅಂದ್ರೆ,
'ಒಂದೂರಲ್ಲಿ ಒಬ್ಬಳು ಅಜ್ಜಿ ಇದ್ದಳಂತೆ, ಅವಳು ಚಿಕ್ಕ ವಯಸ್ಸಿನಲ್ಲೇ ಸತ್ತು ಹೋದಳಂತೆ. ಹಹಹ ...  ' ಎಂದು ನಕ್ಕುಬಿಡ್ತಿದ್ದ.
ಆಗ ನಾನು ಲೋ, ಜೋಕ್ ಹೇಳು ಅಂತ ಹೇಳಿದ್ದು ಅಂದ್ರೆ, ತಗೋಳಪ್ಪಾ, ಅವಗಲು ಮತ್ತೆ ಅದೇ ರಾಗ ಅದೇ ತಾಳ . 'ಒಂದೂರಲ್ಲಿ ಒಬ್ಬಳು ಅಜ್ಜಿ ಇದ್ದಳಂತೆ, ಅವಳು ಚಿಕ್ಕ ವಯಸ್ಸಿನಲ್ಲೇ ಸತ್ತು ಹೋದಳಂತೆ'.

ಅವನು ಹೇಳಿದ್ದನ್ನೇ ಹೇಳ್ತಿದ್ದ. ಆದ್ರೂ ನಾನು ಕೇಳದು ನಿಲ್ಲಿಸಿರಲಿಲ್ಲ. ಅವನು ಹೇಳೋದು ನಿಲ್ಲಿಸಿರಲಿಲ್ಲ.
ನಿಜ ಏನು ಗೊತ್ತ? ನನಗೆ ಆ ಕಥೆ ಮತ್ತು ಆ ಜೋಕ್ ತುಂಬಾನೆ ಇಷ್ಟ. ಅದನ್ನು ಕೇಳಿದಾಗಲೆಲ್ಲ ಖುಷಿಯಿಂದ ನಗುತ್ತಿದ್ದೆ. ದಿನದ ಬೇಸರ, ಸುಸ್ತೆಲ್ಲ ಒಂದೇ ಘಳಿಗೆಯಲ್ಲಿ ಮಾಯಾ ಆಗ್ತಿತ್ತು. ಹೇಳ್ಬೇಕು ಅಂದ್ರೆ ಈಗ್ಲೂ ನಗು ಬರ್ತಿದೆ. ಆದ್ರೆ ಖುಷಿ ಇಲ್ಲಾ. ಈಗ್ಲೂ ಕಥೆ ಹೇಳುತಿದ್ದ ಅಜ್ಜನ ಧ್ವನಿ ಕಿವಿಯಲ್ಲಿ ಪಿಸುಗುಟ್ಟಿದಂತಾಗುತ್ತದೆ, ಆದರೆ ಕಚಗುಳಿಯಿಲ್ಲ.

ಬೇಡದ ಜೀವನದ ಜಂಜಾಟಕ್ಕೆ ಸಿಲುಕಿ ಕಾಣೆಯಾದ ಮುಗ್ದ ಮನುಸುಗಳೆಷ್ಟೋ? ನಾನು ಅವರಲ್ಲಿ ಒಬ್ಬಳೇ?
ಇಲ್ಲಾ, ನಾನವಳಲ್ಲ. ನಾನವರಲ್ಲಿ ಒಬ್ಬಳಲ್ಲ.

ಇನ್ನೆಷ್ಟು ಕಾಲ ಅಜ್ಜನಿಗೆ ತೊಂದರೆ ಕೊಡೋದು, ಅಲ್ವಾ? ಹಾಗಾಗಿ ಸುಮ್ಮನಾಗಿರುವೆ ಅಷ್ಟೇ.

ಕೇಳುವ ಕಿವಿಗಳ್ಳಿದ್ದರೆ ಸಾಕೆ? ಹಾಡುವ ಧ್ವನಿಯು ಬೇಕಲ್ಲವೇ?



No comments:

Post a Comment