ಅದೆಷ್ಟೇ ಬಾರಿ ಕಾಡ ನೋಡ ಹೋದರು ಬೇಜಾರೆಂದು ಅನಿಸುವುದೇ ಇಲ್ಲ. ಸಮಯ ಸಿಕ್ಕಾಗಲೆಲ್ಲ ಈ ಕಲ್ಲು ಮಣ್ಣಿನ ಹಾದಿಯಲಿ ನಡೆದು ಹೋಗುವಾಸೆ. ಕಾಡಿನ ಮೌನವ ಬಿಗಿದಪ್ಪುವಾಸೆ. ಕಚಪಚ ಕಚಪಚ ಎಂದು ದಿನವಿಡೀ ಮಾತನಾಡುವ ಮನುಷ್ಯ, ಶಬ್ಧ ಮಾಡುವ ವಾಹನಗಳು, ಧೂಳು, ಹೋಗೆ, ಬಿಸಿಲು, ರಾಮರಾಮ. ಇದೆಲ್ಲದರಿಂದ ಆಗೊಮ್ಮೆ ಈಗೊಮ್ಮೆ ತಪ್ಪಿಸಿಕೊಂಡು ದೂರ ಓಡಿಹೋಗುವಾಸೆ. ದಿನನಿತ್ಯದ ಜಂಜಾಟಕ್ಕೆ ಒಗ್ಗಿಹೋದ ನನಗೆ ಸಂಪೂರ್ಣವಾಗಿ ಇದನ್ನು ತೊರೆದು ಹೋಗಲು ಸಾಧ್ಯವಿಲ್ಲ, ಈ ಮಲಿನ, ಈ ಶಬ್ಧಗಳು ನನ್ನಲ್ಲಿ ಬೆರೆತು ಹೋಗಿವೆ. ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಜೀವನದ ಮೇಲೆ ಎಷ್ಟೇ ಕೋಪವಿರಬಹುದು, ಆದರೆ ಪ್ರೀತಿಯು ಇದೆ. ಅಮ್ಮ ಅದೆಷ್ಟೋ ಬಾರಿ ನನಗೆ ಹೇಳುವುದಿದೆ, "ವಾರವಿಡೀ ಕೆಲಸ ಮಾಡಿ ಸುಸ್ತಾಗಿದೆ ಎಂದು ಹೇಳ್ತಿಯಲ್ಲ, ಶನಿವಾರ ಭಾನುವಾರ ಆರಾಮವಾಗಿ ಮಲಿಗಿ ವಿಶ್ರಮಿಸುವುದು ಬಿಟ್ಟು ಅಲ್ಲಿ ಇಲ್ಲಿ ಸುತ್ತುವುದಾದರೂ ಏಕೆ". ಅಮ್ಮನಿಗೆ ನಾನು ಅರ್ಥ ಮಾಡಿಸುವುದಾದರೂ ಹೇಗೆ? ನನಗೆ ಅದರ ಅವಶ್ಯಕತೆ ಎಷ್ಟಿದೆಯೆಂದು.
No comments:
Post a Comment