Friday, 23 November 2018

ತು ಖೀಚ್ ಮೇರಿ ಫೋಟೋ

ವಾಸ್ತವತೆ ಹಾಗು ಭ್ರಮೆಯ ನಡುವೆ ಮನುಷ್ಯನು ಅನಾದಿಕಾಲದಿಂದಲೂ ಒಂದಲ್ಲ ಒಂದುರೀತಿಯಲ್ಲಿ ಬಂದಿಯೇ.
ಹದಿನೈದು-ಹದಿನಾರರ ಶತಮಾನದಲ್ಲಿ ನಮ್ಮ ಕನ್ನಡದ ಹೆಮ್ಮೆ ಕನಕ ದಾಸರು ಅದಕ್ಕೆ ಹೇಳಿರುವುದು," ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ"....
ಹಾಗು
ಹದಿನೆಂಟು-ಹತ್ತೊಂಬತ್ತು ಶತಮಾನದಲ್ಲಿ ಆಲ್ಬರ್ಟ್ ಐನ್ಸ್ಟೀನ್ ಹೀಗೆ ಹೇಳಿದ್ದಾರೆ, " I fear the day that technology will surpass our human interaction. The world will have a generation of idiots."

ಹೆಚ್ಚು ವಿಸ್ತಾರಾವಾಗಿ ನಾನಿದನು ಬರೆಯಲಾರೆ. ಯಾಕೆಂದರೆ ಯಾರ ಮನನೋಯಿಸುವುದು ನನ್ನ ಉದ್ದೇಶವಲ್ಲ.

ನಾವೋಗುವ ಸ್ಥಳ ಮುಖ್ಯವೋ?
ಅಲ್ಲಿ ತೆಗೆಯು ನಮ್ಮ ಫೋಟೋ?
ತೋರಿಕೆಯಲ್ಲಿ ಖುಷಿಯೋ?
ಅನುಭವಿಸುವುದಲ್ಲಿ, ನಿಜವಾಗಿಯೂ ಆ ಕ್ಷಣವನ್ನು ಜೀವಿಸುವುದಲ್ಲಿ ಖುಷಿಯೋ?

ಡಿಜಿಟಲ್ ಕಾಲ. ಎಲ್ಲವೂ ಲೆಕ್ಕದಾಟ.
ಬೇಕಾಗಿರುವುದು, ಬೇಡದಿರುವುದು ಎಲ್ಲವನ್ನು ತುಂಬಿಕೊಂಡಿರುವ ಜಂಕ್ ಯಾರ್ಡ್ ಮೆಮೊರಿ ಡಿವೈಸೆಸ್.

ಮಧುವೆಗೂ ಮುನ್ನ, ಮದುವೆಯ ನಂತರ, ಮದುವೆಯ ದಿನ, ಮಕ್ಕಳ ನಾಮಕರಣ, ಮೊದಲ ಹೆಜ್ಜೆ, ಮೊದಲ ಮಾತು, ಹೀಗೆ ಸಾವಿರಾರು ಘಟನೆಗಳ ತುಣುಕುಗಳು ದಿನದಿನ ಪ್ರತಿದಿನ ಪ್ರತಿ ಘಳಿಗೆ ಯಾಂತ್ರಿಕ ನೆನಪಿನ ಪೆಟ್ಟಿಗೆಗೆ ತುಂಬುತ್ತಲೇ ಇರುತ್ತದೆ.

ಯಾವುದು ಖುಷಿ ಎಂಬುದೇ ನನಗೆ ಅರಿವೆಗೆ ಸಿಗುತ್ತಿಲ್ಲ.
ಎಲ್ಲವೂ ಒಂದು ರೀತಿಯ ಭ್ರಾಂತು. ಭ್ರಮೆ.

ತುಂಬಾ ತಲೆಕ್ಕೆಟಾಗ ಅಪ್ಪನ ಬಳಿ ಹೋಗಿ, ನನಗೆ ಏನು ಮಾಡಬೇಕು ತಿಳಿಯುತ್ತಿತ್ತ ಅಪ್ಪ ಎಂದರೆ, ಅಪ್ಪ ಹೀಗೆ ಹೇಳುತ್ತಾರೆ,
" ಬ್ರಹ್ಮನಿಗೆ ಮಾಡಲು ಕೆಲಸವಿರಲಿಲ್ಲ, ಮನುಷ್ಯನನ್ನು ಸೃಷ್ಟಿಸಿದ. ೧೦೦ ವರ್ಷ ಆಯಷ್ ಬೇರೆ ಕೊಟ್ಟ. ಸಾಯುವವರೆಗೂ ಬದುಕ ಬೇಕಲ್ಲ. ಕಾಲ ಕಳೆಯಲು ಏನಾದರು ಕೆಲಸಬೇಕಲ್ಲ. ಅದಕ್ಕೆ ಈ ಮನುಷ್ಯ ಬೇಕ್ಕಾದು ಬೇಡದ್ದು ಏನಾದ್ರು ಮಾಡುತ್ತು ಸಮಯ ಕಳೆಯುತ್ತಾನೆ.ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳ ಬಾರದು. ಜಸ್ಟ್ ಚಿಲ್."

ಗುನುಗುನುಗೋ ಮಧುರ ದನಿ

ಅವನೊಬ್ಬ ಹಾಡುಗಾರ.
ಕೆಲಸದ ವೊತ್ತಡದ ನಡುವೆ ಆಗೊಮ್ಮೆ ಈಗೊಮ್ಮೆ ನನ್ನ ಪ್ರಯೋಗಾಲಯಕ್ಕೆ ಬಂದು ಹಾಡುಗಳ ಗುನುಗುತ್ತಾನೆ.
ನನ್ನನ್ನು ಅವನ ರಾಗಕ್ಕೆ ರಾಗ ಸೇರಿಸುವಂತೆ ಮಾಡುತ್ತಾನೆ. ಗುನುಗುನುಗುಟ್ಟಿಸುತ್ತಾನೆ. ಕೆಲಸದ ಒತ್ತಡವ ಕೆಲಕಾಲ ಮರೆಸುತ್ತಾನೆ.
ಅವನೊಬ್ಬ ಜಾದೂಗಾರ.
ಅವನೊಬ್ಬ ಹಾಡುಗಾರ.
ಮಧುರ ದನಿಯ ಸಾಹುಕಾರ. 

ಅಮ್ಮ, ಮಂಕುತಿಮ್ಮ ಹಾಗು ಮೆಣಸಿನಕಾಯಿ ಬಜ್ಜಿ

ಮೊದಲೇ ಒಮ್ಮೆ ನಾನು ಹೇಳಿದಂತೆ ಈ ಚಹಾ ಸಮಯ ಬಹಳಾನೇ ಇಷ್ಟ ನನಗೆ. ವಿಶೇಷವಾಗಿ ಅದು ಅಪ್ಪ ಅಮ್ಮನ ಜೊತೆ ಇನ್ನು ಮಜವಾಗಿರುತ್ತದೆ. ಕಳೆದ ರವಿವಾರ ಸಂಜೆ ಚಹಾದ ಜೊತೆಗೆ ಅಮ್ಮ ಮೆಣಸಿನಕಾಯಿ ಬಜ್ಜಿ ಮಾಡುತ್ತಿದ್ದರು. ನಾನು ಮತ್ತು ಅಪ್ಪ ಅಡಿಗೆ ಮನೆಯಲ್ಲಿ ಅಮ್ಮನೊಂದಿಗೆ ಮಾತನಾಡುತ್ತ ಬಿಸಿ ಬಿಸಿ ಬಜ್ಜಿ ಮಡಿದ ಕೂಡಲೇ ತಿನ್ನಲ್ಲು ಕಾಯುತ್ತ ಕುಳಿತ್ತಿದ್ದೆವು.
ಮಾತನಾಡುತ್ತ ಮಾತನಾಡುತ್ತ ನಮ್ಮ ಮೂವರ ಮಾತು ಒಂದು ಚರ್ಚೆಯಾಗಿ ಬದಲಾಯಿತು.
ಅಮ್ಮ: ಈಗಿನ ಮಕ್ಕಳ್ಳಿಗೆ ಯಾವುದೇ ಆಚರೆಣೆಗಳಿಲ್ಲ. ದೇವರ ಪೂಜೆ ಮಾಡಬೇಕೆಂಬುದಿಲ್ಲ. ಹಿರಿಯರ ಮಾತಿಗೆ ಬೆಲೆ ಕೊಡುವುದಿಲ್ಲ. ನಮ್ಮ ಕಾಲದಲ್ಲಿ ಹಾಗಿರಲಿಲ್ಲ. ಹಿರಿಯರು ಹೇಳಿದರೆ ಅಲ್ಲಿಗೆ ಮುಗಿಯಿತು. ಒಂದು ಎದುರುಮಾತನಾಡದೆ ಅವರು ಹೇಳಿದಂತೆ ಮಾಡುತ್ತಿದ್ದೆವು. (ಇದು ಅಮ್ಮನ ಮಾಮೂಲಿ ಡೈಲಾಗ್).
ನಾನು: (ವೇದಾಂತಿಯಂತೆ) ವಯಸ್ಸಿನ್ನಲ್ಲಿ ಹಿರಿಯರಾದವರು ಏನೇ ಹೇಳಿದರು ಹೂ ಎನ್ನಬೇಕೇ? ಹಾಗಾದರೆ ಇಲ್ಲಿ ಬೆಲೆಯಿರುವುದು ವಯಸ್ಸಿಗೆ ವರತು ಬುದ್ಧಿವಂತಿಗೆಗಲ್ಲ.?
ಅಮ್ಮ: ಹಿರಿಯರ ಅನುಭವದ ಮಾತುಗಳು ಎಂದು ಸುಳ್ಳಾಗುವುದಿಲ್ಲ.
ನಾನು: ಅನುಭವದ ಮಾತುಗಳು ಸುಳ್ಳು ಎಂಬಹುದಲ್ಲ ನನ್ನ ವಾದ. ಯಾವುದೇ ಒಂದು ರೀತಿ ನೀತಿ ಆಚರಣೆಗಳ್ಳನ್ನು ಪಾಲಿಸಲು ಅಮ್ಮನಾದವರು ಮಕ್ಕಲ್ಲಿ ಹೇಳಿಕೊಡಬೇಕು. ಅದರೆ ಹಿಂದಿರುವ ಉದ್ದೇಶಗಳ್ಳ ಬಗ್ಗೆ ತೀಹೇಳಬೇಕು. ಅರ್ಥ ಮಾಡಿಸಬೇಕು. ಆಗ ಯಾಕೆ ನಾವುಗಳು ಪಾಲಿಸೋಲ್ಲ ಎಂದು ಹೇಳುತ್ತೇವೆ?.
ಅಮ್ಮ: ಕೆಲವೊಂದು ಆಚರಣೆಗಳ ಹಿಂದಿರುವ ವಿಚಾರಗಳು ನಮಗೆ ತಿಳಿದಿರುವುದಿಲ್ಲ. ಹಿರಿಯರು ನಡಿಸಿ ಬಂದ ಸಂಪ್ರದಾಯವನ್ನು ಪ್ರಶ್ನೆ ಮಾಡದೇ ನಾವುಗಳು ನಡಿಸಿಗೊಂಡು ಬಂದಿರುತ್ತೇವೆ. ಎಲ್ಲಾದಕ್ಕು ಉತ್ತರ ಬೇಕೆಂದರೆ ಹೇಗೆ?
ಅಪ್ಪ: ನನ್ನ ಪ್ರಕಾರ ಎಲ್ಲಾ ಆಚರಣೆಗಳ ಹಿಂದೆಯೂ ಗಾಢವಾದ ಉದ್ದೇಶವಿರಬೇಕೆಂಬುದೇನು ಇಲ್ಲ. ಕೆಲವೆಲ್ಲ ಕೇವಲ ಮನುಷ್ಯನನ್ನು ಒಂದು ಆರೋಗ್ಯಕರ ಸಮಾಜದ ಹಾದಿಯಲ್ಲಿ ಹಿಡಿದಿಡಲು ಮಾಡಿರುವು ನಿಯಮಗಳು ಆಗಿರುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಅಷ್ಟೊಂದು ಪ್ರಶ್ನೆ ಕೇಳುವ ಅವಶ್ಯಕತೆಯೇ ಬರುವುದಿಲ್ಲ. ನಿನಗೆ ಅರ್ಥವಾಗುತ್ತದೆ ಮಗಳೇ.
ಉದಾಹರಣೆಗೆ ನಮ್ಮ ಹವ್ಯಕ ಸಂಪ್ರದಾಯದ ಮದುವೆಯನ್ನೇ ತೆಗೆದುಕೋ. ಎಷ್ಟೊಂದು ವಿಧಿವಿಧಾನಗಳಿವೆ. ಹಳೆಯ ಕಾಲದಲ್ಲಿ ವಾರಗಟ್ಟಲ್ಲೇ ಮದುವೆ ನಡೆಯುತ್ತಿತ್ತು. ಅದರ ಉದ್ದೇಶ ಹುಡುಗ ಹುಡುಗಿ ಒಬ್ಬರನ್ನೊಬ್ಬರು ಅರಿತುಕೊಂಡು ಬೇರೆಯಲಿ ಎಂಬುದು ಒಂದಷ್ಟು ಕಾರಣಗಲ್ಲಿ ಒಂದು ಕಾರಣ.
ಇನ್ನು ಈಗಿನ ಕಾಲದಂತ್ತೆ ಸಂಪರ್ಕವಾಹಿನಿ ಯಾವುದು ಆಗಿನ ಕಾಲದಲ್ಲಿ ಇರಲ್ಲಿಲ್ಲ. ಎಲ್ಲರೊಂದಿಗೆ (ಬಂದು ಭಾಂದವರು) ಬೆರೆಯುವ ಅವಕಾಶಗಳು ಕಡಿಮೆ. ದುಡಿಮೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದರು. ಹಬ್ಬ, ಹರಿದಿನಗಳ ಹೆಸರಿನಲ್ಲಿ ಜೊತೆ ಸೇರಿ ಸಂತೋಷದಿ ಬೆರೆತು ನಲಿಯುತ್ತಿದ್ದರು.
ಹೀಗೆ ನಮಗೆ ಅರಿವಿಲ್ಲದ್ದ ಹತ್ತು ಹಲವು ವಿಷಯಗಳಿರುತ್ತವೆ.
ಮಂಕುತ್ತಿಮ್ಮ ಒಂದೆಡೆ ಹೀಗೆ ಹೇಳಿದ್ದಾನೆ,
"ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು.
ಹೊಸ ಯುಕ್ತಿ ಹಳೆತತ್ವದೊಡಗೂಡೆ ಧರ್ಮ.
ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ,
ಜಸವು ಜನಜೀವನಕೆ."
ನೀವು ಈಗಿನ ಮಕ್ಕಳ್ಳು ಕೇಳುವ ಪ್ರಶ್ನೆಗಳು ತಪ್ಪೆಂದು ನಾನು ಹೇಳುವುದಲ್ಲ. ಸ್ವಲ್ಪ ತಾಳ್ಮೆ ಹಾಗು ಸಹನೆಯಿಂದ, ಹಿರಿಯರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೆಲುವು ವ್ಯವಧಾನ ಬೆಳೆಸಿಕೊಳ್ಳಬೇಕು. ಅದನ್ನು ಆಚರಣೆಗೆ ತರುವುದು ಬಿಡುವುದು ಮುಂದಿನ ಪ್ರಶ್ನೆ.  ನಿಮಗೆ ನಿಮ್ಮದೆಯಾದ ಆಲೋಚನಾ ಶಕ್ತಿಯಿದೆ. ವಿವೇಚನೆ ಇದೆ. ಯಾವುದಕ್ಕೂ ದುಡುಕದೆ ಯೋಚಿಸಿ, ಯೋಜನೆಗಳ್ಳನ್ನು ಮಾಡಿ. ಜೀವನದಲ್ಲಿ ಸಂತೋಷದಿಂದಿರಿ. ಮಕ್ಕಳ್ಳು ಚೆನ್ನಾಗಿರಗಿರಬೇಕು ಎಂಬುದೊಂದೇ ನಮ್ಮ (ತಂದೆ ತಾಯಿಯ) ಆಸೆ ಅಲ್ಲವೇ.
ನಾನು: ಅಲ್ಲ. ನಿಮ್ಮ ಆಸೆ ಮಸಾಲೆದೋಸೆ ಎಂದೇ. (ಹಳೆಯ ಲೇಖನ "ದೋಸೆ" ಓದಿ ನೆನಪಿನಲ್ಲಿದ್ದರೆ ನೀವು ರಿಲೇಟ್ ಮಾಡಬಹುದು.)
ಅಪ್ಪ: ಅಲ್ಲ ಅಲ್ಲ. ಸದ್ಯಕೀಗ ಮೆಣಸಿನಕಾಯಿ ಬಜ್ಜಿ.
ಮೂವರು ನಕ್ಕೆವು.
ಅಣ್ಣ ಅತ್ತಿಗೆಯನ್ನು ಬಜ್ಜಿ ತಿನ್ನಲ್ಲು ಕರೆದೆವು. 

































Wednesday, 7 November 2018

ಹೂವಿನ ಹಡಗಲಿ

ನಮ್ಮ ನಮ್ಮ ಭಾಷೆ, ನಮ್ಮ ನಮ್ಮ ದೇಶ, ನಾವುಟ್ಟಿದ ಸ್ಥಳ, ಹೀಗೆ ನಮ್ಮದ್ದು ಅಂತ ಯಾವುದೆಲ್ಲ ಇದೆ ಅದರ ಮೇಲೆ ಎಲ್ಲಿಲ್ಲದ ಹೆಮ್ಮೆ, ಎಲ್ಲಿಲ್ಲದ ಪ್ರೀತಿ, ಎಲ್ಲಿಲ್ಲದ ಗೌರವ. ಈ ಭಾವನೆಗಳು ಸರ್ವೇ ಸಾಮಾನ್ಯ. ನನಗು ಹಾಗೆ, ಅದೇನೋ ಕನ್ನಡ ಭಾಷೆಯೆಂದರೆ ಅತಿ ಪ್ರೀತಿ.

ನಮ್ಮ ಕರ್ನಾಟಕ ರಾಜ್ಯದಲ್ಲಿ ೩೦ ಜಿಲ್ಲೆಗಳಿವೆ. ೨೭೦ ಪಟ್ಟಣ. ಸರಿಸುಮಾರು ೨೯೪೦೬ ಹಳ್ಳಿಗಳು. ಒಂದೊಂದು ಸ್ಥಳಗಳ್ಳದ್ದು ಒಂದೊಂದು ವಿಬ್ಭಿನ್ನವಾದ ಹೆಸರುಗಳು. ಇವೆಲ್ಲದರ ನಡುವೆ ಮೊನ್ನೆ ಮೊನ್ನೆ ಪರಿಚಯವಾದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಎಂಬ ಪುಟ್ಟ ಪಟ್ಟಣದ ಹೆಸರು ಬಹಳವಾಗಿ ನನಗೆ ಹಿಡಿಸಿತು. ಎಷ್ಟು ಚೆಂದ ಈ ಹೆಸರು. ಸಂಗೀತ ಕೇಳಿದಂತೆ  ಮಧುರವಾಗಿದೆ. ಹೆಸರಿನಂತೆ ಊರು ಸಹ ಬಹಳ ಸುಂದರವಾಗಿದೆ.

ತನ್ನ ನಗುಮೊಗದಿ, ತನ್ನ ಸುಗಂಧದಿ ಮನಸಿಗೆ ಮುದ ನೀಡುವ ಹೂವು, ದೂರ ಅದೆಲ್ಲೋ ಕಾಣದ ದಿಗಂತದೆಡೆಗೆ ಕರೆದೊಯ್ಯುವ ಹಡಗು. ಮನಸಿಗೆ ಮುದ ನೀಡಿದ ಹೂವೆ ಹಡಗಾಗಿ ದೂರ ದಿಗಂತದೆಡೆಗೆ ಕರೆದೊಯ್ಯ್ದರೆ ಹೇಗಿರುತ್ತದೆ? ಅಬ್ಬಾ ಆ ಕಲ್ಪನೆಯೇ ಇಷ್ಟು ಸುಂದರವಾಗಿರುವಾಗ ಅದು ವಾಸ್ತವವಾದರೆ ಹೇಗಿರಬಹುದು?

ಹೂವಿನ ಹಡಗಲಿ, ಇರುಳ ಚೆಂದಿರನ ಬೆಳಕಳಿ, ದೂರ ಅದೆಲ್ಲೋ ಆಕಾಶ ಸಮುದ್ರವ ಚುಂಬಿಸುವ ಆ ಜಾಗಕ್ಕೆ ನಾನೊಮ್ಮೆ ಹೋಗಬೇಕಿದೆ.

(ಈ ಹೆಸರಿನ ಹಿಂದಿರುವ ಇತಿಹಾಸ ತಿಳಿಯುವ ಮನಸ್ಸಿದ್ದಲ್ಲಿ ವಿಕಿಪೀಡಿಯದಲ್ಲಿ ನೋಡಿ.)

ಬೆಳಕು

ಬೆಳಕಿನ ಹಬ್ಬ ದೀಪಾವಳಿ ದಿನದಂದು ನಿಮಗೋಂದು ಕತೆ ಹೇಳುವೆ. ಕೇಳಿ.
ಸಾಮಾನ್ಯವಾಗಿ ನಾವು ಭಾರತೀಯರು ನಮ್ಮ ನಮ್ಮ ಮಕ್ಕಳ್ಳನ್ನು ನಮ್ಮ ಮನೆಯ ಬೆಳಕು, ಇವನು/ಇವಳು ಹುಟ್ಟಿ ನಮ್ಮ ಮನೆಗೆ ಬೆಳಕು ತಂದ/ತಂದಳು ಎಂದೆಲ್ಲ ಹೇಳುತ್ತೇವೆ ಅಥವಾ ಹೇಳುವುದ್ದನ್ನು ಕೇಳಿರುತ್ತೇವೆ. ರೂಪಕಾಲಂಕಾರವಾಗಿ ಹೇಳುವ ಜನರ ಮದ್ಯೆ ನನ್ನದೊಂದು ಸತ್ಯ ಘಟನೆಯಿದೆ. 
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಒಂದು ಸುಂದರವಾದ ಪುಟ್ಟ ಸ್ಥಳ ಕಾವು. ನನ್ನ ಅಜ್ಜನ ಮನೆ. ಇದು ಸುಮಾರು ೧೯೮೭ ರ ಮಾತು. ಆಗ ನನ್ನ ಅಜ್ಜನ ಮನೆಯಲ್ಲಿ ವಿದ್ಯುತ್ ಸಂಪರ್ಕವಿನ್ನು ಆಗಿರಲಿಲ್ಲ. ಸೀಮೆ ಎಣ್ಣೆಯ ಚಿಮಣಿ ದೀಪದಲ್ಲೇ ಕತ್ತಲೆಯನ್ನು ದೂಡುತ್ತಿದ್ದರು. ೧೫-೧೨-೧೯೮೭ ರಲ್ಲಿ ನನ್ನಣ್ಣ ಹುಟ್ಟಿದೆ. ಅದೇ ಸಂದರ್ಭದಲ್ಲಿ ಅಜ್ಜನ ಮನೆಗೆ ವಿದ್ಯುತ್ ಸಂಪರ್ಕಸಿಕ್ಕಿತ್ತು. ನನ್ನ ಚಿಕ್ಕಪ್ಪನಿಗೆ ಕೆಲಸ ದೊರೆಯಿತು. ಆಗ ನನ್ನಜ್ಜ ಹೇಳಿದ ಮಾತು, "ನಮ್ಮಣ್ಣು ನಮ್ಮ ಮನೆಗೆ ಬೆಳಕು ತಂದ". ಅಕ್ಷರಶಃ ನನ್ನಣ್ಣ ನಮ್ಮ ಮನೆಯ ಬೆಳಕಾದ. ನನ್ನಜ್ಜನ ಮನೆಯ, ಮನವ ಬೆಳಗಿದ. ನಮ್ಮಮ್ಮನ ಮುಖದ ನಗುವಾದ.  

Tuesday, 6 November 2018

ಹೆಸರಿಲ್ಲದಿರೋ ಬಂದುವೇ

 ಜೊತೆಯಲ್ಲಿ ಸೇರಿ ನೆನಪುಗಳ ಕಟ್ಟೋಣ. ಇದ್ದಷ್ಟು ದಿನ ಜೊತೆಯಲ್ಲಿ ಬಾಳೋಣ. ನೀನೆಂದಿಗೂ ನನಗೆ ಸ್ವಂತವಲ್ಲ. ನಿನಗೆ ನನ್ನ ಮೇಲೆ ಪ್ರೀತಿಯೂ ಇಲ್ಲ. ಹಾಗಂತ ನಾನು ನಿನಗೆ ಬೇಡಯೆಂದಲ್ಲ. ಮುಂದೊಂದುದಿನ ನಮ್ಮಿಬರ ದಾರಿ ಬದಲಲಿದೆ. ಇದರ ಅರಿವು ನನಗು ಇದೆ. ನಿನಗೂ ಇದೆ. ಹೇಳಿದಳು ಅವಳು. 

“Memories warm you up from the inside. But they also tear you apart.” 
― Haruki Murakami, Kafka on the Shore
ನಿನ್ನೊಂದಿಗೆ ಮತ್ತಷ್ಟು ನೆನಪುಗಳ ಕಟ್ಟಲು ನನಗೆ ಸಾಧ್ಯವಿಲ್ಲ. ನಿನ್ನೊಂದಿಗೆ ದಿನ ಕಳೆದಂತೆ ಈ ನೆನಪುಗಳು ಗಾಢವಾಗುತ್ತಾ ಹೋಗುತ್ತದೆ. ಇದರಿಂದ ಹೊರಬರಲು ತುಂಬಾ ಸಮಯಬೇಕು.
ಮಾಸಬೇಕು ನಿನ್ನ ನನ್ನ ನೆನಪುಗಳು. ಉತ್ತರಿಸಿದ ಅವನು.

ಅವನ ಮಾತಿನಲ್ಲಿದ್ದ ಸತ್ಯದ ಅರಿವು ಮೊದಲಿಂದಲೇ ತಿಳಿದ್ದಿತ್ತು. ಆದರೂ ಮುಕ್ತಾಯಕ್ಕೆ ಒಳ್ಳೆಯ ಪದ ಬಳಸ ಬಹುದಿತ್ತು.

ಅಳಿಸಲೇ ಬೇಕೆಂದಿದ್ದರೆ ನೆನಪುಗಳನ್ನು ಚಿತ್ರಿಸುವುದೇಕೇ? ನೆನಪುಗಳ ಮಾಸಿಸಲು ಮುಪ್ಪಿನ ಕಾಲವೊಂದಿರುವುದು. ಅಲ್ಲಿವರೆಗೂ ಮೆದುಳಿನ ಯಾವುದೊ ಮೂಲೆಯಲ್ಲಿ ಒಂದಿಷ್ಟು ಜಾಗಕೊಡಲೇನು ಕಷ್ಟ? ನಮ್ಮದೇ ಕೂಸದ ಅದನ್ನು ದಮ್ಮು ಕಟ್ಟಿ ಕೊಲ್ಲುವುದು ಅಪರಾದವಲ್ಲವೇ? ಆ ಮುದ್ದಾದ ಭಾವನೆಗಳಿಗೆ ಸಲ್ಲಬೇಕಾದ ಗೌರವಗಳನ್ನು ಕೊಡಲೇ ಬೇಕಲ್ಲವೆ. ಅವನಿಗಿದನು ಹೇಳಬೇಕೆಂದುಕೊಂಡಳು ಅವಳು, ಹೇಳಲಿಲ್ಲ.   

ಅವಳೇಳದೆಯೇ ಇದನರಿವಷ್ಟು ಸೂಕ್ಷ್ಮನವನು. ಹಾಗೆಂದು ನಂಬಿದ್ದಳು ಅವಳು.

ನಡೆದ ಘಟನೆಗಳಿಂದ (ಮೇಲಣ ಮಾತು ಕತೆಯಿಂದ) ಅವಳಿಗೆ ದುಃಖ್ಖ ಸ್ವಲ್ಪವೂ ಇಲ್ಲ. ಬರಿಯ ನೋವು ಅಷ್ಟೇ.
ಕಟ್ಟಿದ ನೆನಪುಗಳಿಂದ ಪಶ್ಚಾತಾಪವಿಲ್ಲ, ಬರಿಯ ಖುಷಿ ಅಷ್ಟೇ.



ಅರಿವೇ ಗುರು. (part-1)

ಅರಿವೇ ಗುರು. ಬಸವಣ್ಣನವರ ಈ ಮಾತು ಎಷ್ಟು ಸತ್ಯ. ಅಲ್ಲವೇ?
ನನಗೆ ಅಪ್ಪನೇಳಿದ ಮಲಯಾಳಂ ಭಾಷೆಯ ನುಡಿಮುತ್ತೊಂದು ಹೀಗಿದೆ "ತನ್ನತಾನರೀತಿಲೇ ಪಿನ್ನೆ ತಾನರಿವು" (ಪದಗಳು ತಪ್ಪಿದ್ದರು ಇರಬಹುದು, ಮಲಯಾಳಂ ಭಾಷೆ ನನಗೆ ಬರುವುದಿಲ್ಲ).  ಅಂದರೆ, "ನಿನ್ನ ನೀ ಅರಿತರೆ. ಬೇರೆಯದೆಲ್ಲ ನಂತರ ಅರಿವಾಗುತ್ತದೆ".




ಯವನಿಕಾ ಕ್ಯಾಂಟೀನ್

೨೦೧೫ರಲ್ಲಿ ಸಂಶೋಧನ ವಿಧ್ಯಾರ್ಥಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದ ಭೌತಾಶಾಸ್ತ್ರ ವಿಭಾಗಕ್ಕೆ ಸೇರಿಕೊಂಡೆ. ನಂತರದ ದಿನಗಲ್ಲಿ ಗೆಸ್ಟ್ ಲೆಕ್ಚರರ್ ಆಗಿ  UVCE (University Visvesvaraya College of Engineering ಬೆಂಗಳೂರು ವಿಶ್ವವಿದ್ಯಾಲಯದ ಒಂದು ಅಂಗಸಂಸ್ಥೆ) ಯಲ್ಲಿ ಕೆಲಸ ಮಾಡಲು ಶುರು ಮಾಡಿದೆ. ಆ ದಿನಗಳ್ಲಲಿ ನನ್ನ ಸಹೋದ್ಯೋಗಿಯಾಗಿದ್ದ ರವಿ ಪಾಟೀಲ್ ಸರ್ ನನ್ನನ್ನೊಂದು ದಿನ ಊಟಕ್ಕೆಂದು UVCE ಬಳಿ ಲೋಕೋಪೋಯೋಗಿ ಇಲಾಖೆಯ (PWD) ಒಳಗಣ ಒಂದು ಕ್ಯಾಂಟೀನ್ಗೆ ಕರೆದೋಯ್ದರು, ಅದುವೆ ಯವನಿಕಾ ಕ್ಯಾಂಟೀನ್ . UVCE ಭೌತಾಶಾಸ್ತ್ರ ಪ್ರಯೋಗಾಲಯದಿಂದ ಸುಮಾರು ೧೦ ನಿಮಿಷ ನಡೆದೋಗುವ ದಾರಿ. ದಾರಿ ಉದ್ದಕ್ಕೂ ರವಿ ಸರ್ ಆ ಕ್ಯಾಂಟೀನ್ನಲ್ಲಿ ಸಿಗುವ "ರಸಂ" ಬಗ್ಗೆ ಮಾತನಾಡುತ್ತ, ಹೊಗಳುತ್ತಾ ಹೋದರು. ಮೊದಲೇ ಹೊಸ ರುಚಿಯ ರುಚಿಸಲು ಹುಡುಕಾಡುವ ನನ್ನ ನಾಲಿಗೆ, ಅವರ ವಿವರಗಳ ಕೇಳಿ ನೀರೂರಿಸಲು ಶುರು ಮಾಡಿತ್ತು. ಅವರು ನನ್ನಲ್ಲಿ ಮೂಡಿಸಿದ್ದ ನಿರೀಕ್ಷೆಗಳಾವುವು ಹುಸಿಯಾಗಲಿಲ್ಲ. ಜೀವನದಲ್ಲಿ ಸೇವಿಸಿದ ಅತ್ಯುತ್ತಮ್ಮ ರಸಂಗಳಲ್ಲಿ ಅದು ಕೂಡ ಒಂದಾಗಿತ್ತು. ನನಗಾಗುವಾಗ ಸ್ವಲ್ಪ ಹೆಚ್ಚೇ ಕಾರ ಎನಿಸಿತಾದರೂ ಮೂಗನ್ನು ಸುರ್ ಸುರ್ ಮಾಡುತ್ತಲ್ಲೇ ರಸಂ ಊಟ ಮಾಡಿದೆ. ಅದಾದ ನಂತರದ ದಿನಗಲ್ಲಿ ಅದೆಷ್ಟೋ  ಸಲ ಅಲ್ಲಿ ಊಟಕ್ಕೆ ಹೊಗ್ಗಿದ್ದೇನೆ. ಆದರೆ ಆ ರಸಂ ರುಚಿ ನನ್ನನ್ನು ತನ್ನೊಳಗೆ ಎಷ್ಟು ಭದ್ರವಾಗಿ ಬಂಧಿಸ್ಸಿತೆಂದರೆ ಇದುವರೆಗೂ ಆ ಕ್ಯಾಂಟೀನ್ನಲ್ಲಿ ಬೇರೆ ಯಾವುದೇ ಅಡಿಗೆಯ ರುಚಿ ನೋಡಲು ಬಿಡದಷ್ಟು.

ನೀವು ಒಮ್ಮೆ ಭೇಟಿ ಕೊಡಿ. ಒಮ್ಮೆ ನಿಮ್ಮ ನಿಮ್ಮ ಮೂಗನ್ನು ಸುರ್ ಸುರ್ ಯೆಂದು ಶಬ್ಧಮಾಡಿ. ಒಂದು ಪ್ಲೇಟ್ ರಸಂ ಊಟ ಮಾಡಿನೋಡಿ.
***********************************************
ನನ್ನಪ್ಪ ಹೇಳಿದ ಒಂದು ಸಣ್ಣ ಕತೆ ನಿಮಗೆ ಹೇಳಬೇಕೆನಿಸುತ್ತಿದೆ.
ಒಂದು ಊರಿನಲ್ಲಿ ಒಬ್ಬ ರಾಜನಿದ್ದನಂತೆ.
(ಯಾವ ಊರು? ರಾಜನ ಹೆಸರೇನೆಂದು? ನನ್ನ ಕೇಳಬೇಡಿ. ಅವನ ಹೆಸರೇನೆಂದು ಅಪ್ಪನಿಗೆ ನೆನಪಿಲ್ಲ. ಊರು ಯಾವುದೆಂದು ಗೊತ್ತಿಲ್ಲ.)
ಆ ರಾಜ ಮಹಾನ್ ತಿಂಡಿಪೋತ.
ಅವನ ರಾಜ್ಯವಲ್ಲದೆ, ಸುತ್ತ ಮುತ್ತ ಇದ್ದ ರಾಜ್ಯಗಲ್ಲಿಂದ ಒಳ್ಳೊಳ್ಳೆ ಅಡಿಗೆ ಭಟ್ಟರನ್ನು ಕರೆಸಿ ರುಚಿ ರುಚಿಯಾದ ತಿಂಡಿ ತಿನಿಸುಗಳ್ಳನ್ನು ಮಾಡಿಸಿ ತಿನ್ನುತಿದ್ದನಂತೆ.
ಪಾಪ.... ಅಡಿಗೆ ಮಾಡಿ ಬಡಿಸುವವರು ಎಷ್ಟೇ ಜನವಿದ್ದರು, ಹೊಟ್ಟೆಗೆ ಹಿಡಿಸುವಷ್ಟೇ ಅಲ್ಲವೇ ತಿನ್ನಲ್ಲು ಸಾಧ್ಯ. ಅದಕ್ಕೆ ಈ ಭೂಪ ಏನು ಮಾಡುತ್ತಿದ್ದನಂತೆ ಗೊತ್ತೇ? ಹೊಟ್ಟೆ ತುಂಬುವವರೆಗೂ ಘಡತ್ತಾಗಿ ತಿಂದು, ನಂತರ ವೈದ್ಯರ ಸಲಹೆಯಂತೆ ಮಾಡಿ, ತಿಂದದ್ದನ್ನೆಲ್ಲ ಹೊರ ಕಕ್ಕಿ ಹೊಟ್ಟೆ ಕಾಲಿ ಮಾಡಿ, ಮತ್ತೆ ತಿನ್ನುತ್ತಿದ್ದನಂತೆ.
************************************************
ಎಲ್ಲರೂ ದುಡಿಯುವುದು ಈ ಹೊಟ್ಟೆಗಾಗಿಯೇ ಅಲ್ಲವೇ. ದುಡಿಮೆಯ ಅಥವ ಊಟದ ವಿಷಯವೇನಾದರೂ ಬಂದಾಗ ಅಪ್ಪ ಮಾತಿನ ನಡುವೆ ಈ ಹಾಸ್ಯ ಮಾಡುತ್ತಿರುತ್ತಾರೆ, "ಹೇ ಕುದ, ಜೋ ಭೀ ಕೀಯ ಇಸ್ ಪಾಪಿ ಪೆಟ್ಕೆ ವಾಸ್ತೆ ಕೀಯ, ಇಸ್ ಪೆಟ್ ಕೋ ಮತ್ ಮಾರೋ, ಮಾರ್ನ ಹೇತೋ **ಡ್ ಫೆ ಮಾರೋ" ಯೆಂದು ಮುಸಲ್ಮಾನರು ನಮಾಜ್ ಮಾಡುವುದು.
(ಇಲ್ಲಿ ಯಾವುದೇ ಧರ್ಮ ಹಾಗು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಉದ್ದೇಶವಲ್ಲ. ಕೇವಲ ವಾಸ್ತವತೆಯನ್ನು ಹಾಸ್ಯದ ಮೂಲಕ ಪ್ರತಿಬಿಂಬಿಸುವುದಷ್ಟೇ. ಕ್ಷಮೆ ಇರಲಿ.)
*************************************************