ಹೀಗೊಂದು ರಾತ್ರಿ,
ನನ್ನಿನಿಯ ಹಾಗು ನಾನು,
ನಮ್ಮಿಬ್ಬರ ಜವ್ವನಿಗ (ಹೈ ಸ್ಕೂಲ್ ಹಾಗು ಕಾಲೇಜುದಿನಗಳು / ಟೀನ್ ಏಜ್) ಕಾಲದ ಹಳೆಯ ನೆನಪುಗಳ ಕಪಾಟು ಬಿಡಿಸಿ,
ಧೂಳಿಡಿದಿದ್ದ ಪಾತ್ರಗಳ ಒಂದೊಂದೇ ಆಚೆ ತೆಗೆದು,
ಒಬ್ಬರಿಗೊಬ್ಬರು ಕತೆಯ ಹೇಳುತ್ತಾ ಕುಳಿತ್ತಿದೆವು.
ಒಂದಷ್ಟು ನಗೆ, ಒಂದಷ್ಟು ತರಲೆ, ಒಂದಷ್ಟು ಹುಸಿಮುನಿಸು,
ಗಡಿಯಾರವು ಇಂದದೇಕೋ ಶಾಂತವಾಗಿತ್ತು, ನಮಗೆ ತೊಂದರೆ ಕೊಡಬಾರದೆಂದು ಸುಮ್ಮನಾಗಿತ್ತು.
ಸಮಯದ ಅರಿವೇ ಇಲ್ಲದೆ ನಾವಿಬ್ಬರು ನಮ್ಮಿಬರ ಕಳೆದ ಜೀವನವ ಒಬ್ಬರಾಮುಂದೊಬ್ಬರು ಬಿಚ್ಚಿಡುತ್ತಾ ಹೋದೆವು.
ಮತ್ತಷ್ಟು ಒಬ್ಬರಿಗೊಬ್ಬರ ಪರಿಚಯ ಆಳವಾಗುತ್ತ ಹೋಯಿತು. ಪ್ರೀತಿಯಾಭಿಮಾನಗಳು ಕೂಡ.
ನನ್ನಾತ ತುಂಟನೆಂದು ತಿಳಿದಿತ್ತು, ತರಲೆಯೂ ಹೌದು. ಪಾಪಣ್ಣನೆಂದು ಗೊತ್ತಿದಿತ್ತು. ಒಂದಷ್ಟು ಗುಟ್ಟುಗಳಿರಬಹುದೆಂಬ ಅರಿವು ಇದ್ದಿತ್ತು.
ಅವರಿಗೂ ನನ್ನ ಬಗ್ಗೆ ಹೀಗೆಯೇ ಅನಿಸಿರಬಹುದೇನೋ.
ಗಟ್ಟಿಯಾಗಿ ಬಂದಾಗಿದ್ದ ನನ್ನ ಕಪಾಟಿನ ಕೆಲವು ವಿಭಾಗಗಳು ತೆರೆಯದೆ ಹಾಗೆಯೇ ಉಳಿದು ಹೋಯಿತು.
ಹೇಳಬೇಕನಿಸಿದ ಮಾತ್ತೊಂದು ಮನದಲ್ಲಿಯೇ ಉಳಿದು ಹೋಯಿತು.
ಅವರಲ್ಲಿಯೂ ನನಗೆ ಹೇಳಲಾಗದ ಮಾತ್ತೊಂದು ಇರಬಹುದು.
ಇರಲಿ, ಜೀವನ ಪೂರ್ತಿ ಜೊತೆಯಲ್ಲಿಯೇ ಇರುವೆವು.
ಮುಂದೊಂದುದಿನ ಆ ವಿಭಾಗಗಳು ತೆರೆದು ಕೊಳ್ಳ ಬಹುದು.
ಹಳತುಗಳು ಹಳೆಯದಾದವು.
ಏನಿದ್ದರೂ ಅವುಗಳ ಕೇಳಿ ನಗಬೇಕಷ್ಟೆ.
ನಕ್ಕು ಮತ್ತೆ ಕಪಾಟಿನಲ್ಲಿ ಬಂದು ಮಾಡಿಡಬೇಕಷ್ಟೆ.
ಮಾಡಲು ಕೆಲಸವಿಲ್ಲದಾಗ ಜೊತೆಯಲ್ಲಿ ಕೂತು ಧೂಳು ಹೊಡೆಯಲು, ಒಂದಷ್ಟು ನಗಲು, ಒಂದಷ್ಟು ತರಲೆಮಾಡಲು , ಒಂದಷ್ಟು ಹುಸಿಮುನಿಸಿಗೆ ಅವಕಾಶ ಕೊಡುತ್ತಾ, ಗಡಿಯಾರಕ್ಕೆ ಮತ್ತೆ ಹಾದಿತಪ್ಪಿಸುತ್ತಾ ಹರಡಲು (ಹರಟೆ ಹೊಡೆಯಲು) ಇವುಗಳೇ ನಮ್ಮಿಬರ ಆಸ್ತಿ.